ಪೀಟರ್
ಯೂರೋಪಿನಲ್ಲಿ ಆಳಿದ ದೊರೆಗಳು.

1. ಸರ್ಬಿಯ, ಯುಗೊಸ್ಲಾವಿಯಗಳ ದೊರೆಗಳು : ಪೀಟರ್ I: 1844-1921 ಸರ್ಬಿಯದ ದೊರೆ. ಕಾರ ಜಾರ್ಜ್‍ವಿಚ್ ಮನೆತನದವ. ಅಲೆಕ್ಸಾಂಡರನ ಮಗ. ಬೆಲ್‍ಗ್ರೇಡಿನಲ್ಲಿ 1844 ರಲ್ಲಿ ಹುಟ್ಟಿದ. ಒಂದನೆಯ ಅಲೆಕ್ಸಾಂಡರ್ ಓಬ್ರೆನೋವಿಚ್ 1903 ರಲ್ಲಿ ಕೊಲೆಗೀಡಾದಾಗ ಸೈನ್ಯ ಇವನನ್ನು ದೊರೆ ಎಂದು ಘೋಷಿಸಿತು. ಸಂಸತ್ತು ಸೌರ್ವಾನುಮತದಿಂದ ಆಯ್ಕೆ ಮಾಡಿತು. ಇವನು ರಷ್ಯ ಫ್ರಾನ್ಸ್‍ಗಳೊಂದಿಗೆ ಮೈತ್ರಿ ಸಾಧಿಸಿದ. ಒಂದನೆಯ ಮಹಾಯುದ್ದದ ಅನಂತರ ಸರ್ಬರ, ಕ್ರೋಟರ ಮತ್ತು ಸ್ಲಾವನರ ದೊರೆಯೆಂಬ ಬಿರುದು ಪಡೆದ. 1921 ರಲ್ಲಿ ಈತ ತೀರಿಕೊಂಡ. ಈ ಪ್ರದೇಶಗಳು ಸೇರಿ ಮುಂದೆ ಯುಗೊಸ್ಲಾವಿಯವಾಯಿತು.

ಪೀಟರ್ II : ಯುಗೊಸ್ಲಾವಿಯಾದ ದೊರೆ.  ಅಲೆಕ್ಸಾಂಡರನ ಮಗ. 1 ನೆಯ ಪೀಟರನ ಮೊಮ್ಮಗ. 1923 ರಲ್ಲಿ ಹುಟ್ಟಿದ. ಅಲೆಕ್ಸಾಂಡರ್ ಕೊಲೆಯಾದಾಗ (1934) ದೊರೆಯಾದ. ಇವನ ಚಿಕ್ಕಪ್ಪ ರಾಜಪಾಲಕವಾಗಿ ಇವನ ಪರವಾಗಿ 1934 ರಿಂದ 1941 ರ ವರೆಗೆ ಆಳಿದ. 1941 ರ ಮಾರ್ಚ್‍ನಲ್ಲಿ ಇವನು ಆಳತೊಡಗಿದ. 1941 ರ ಏಪ್ರಿಲ್‍ನಲ್ಲಿ ಜರ್ಮನಿ ಯುಗೊಸ್ಲಾವಿಯಾವನ್ನಾಕ್ರಮಿಸಿತು. ಪೀಟರ್ ಲಂಡನ್ನಿನಲ್ಲಿ ಸರ್ಕಾರವನ್ನು ಸ್ಥಾಪಿಸಿದ. 1945 ರಲ್ಲಿ ಟೀಟೊ ಅಧ್ಯಕ್ಷತೆಯಲ್ಲಿ ಯುಗೊಸ್ಲಾವಿಯ ಗಣರಾಜ್ಯವಾಯಿತು. ಪೀಟರ್ ಸಿಂಹಾಸನವನ್ನು ಕಳೆದುಕೊಂಡು ದೇಶಭ್ರಷ್ಠನಾದ.

2. ಆರಗಾನಿನ ದೊರೆಗಳು : ಪೀಟರ್ I : 1068-1104. s ಸ್ಯಾಂಕೊರ್ಯಾಮಿರೆಸನ ಮಗ. ಮೂರರಿಂದ ಹ್ವೆಸ್ಕ ಮತ್ತು ಬಾರ್ಬಾಸ್ಟ್ರೊವನ್ನು ಗೆದ್ದುಕೊಂಡ. ಇವನಿಗೆ ಎರಡು ವಿವಾಹಗಳಾದರೂ ಮಕ್ಕಳಿರಲಿಲ್ಲ. ಇವನ ಮರಣದ ಅನಂತರ ಈತನ ತಮ್ಮ 1 ನೆಯ ಆಲ್ಫಾನ್ಸೋ ಪಟ್ಟಕ್ಕೆ ಬಂದ.

ಪೀಟರ್ II : 1174-1213 ಇವನು 2 ನೆಯ ಆಲ್ಫಾನ್ಸೋನ ಮಗ. ಇವನು ಶೂರನಾದರೂ ಅಹಂಕಾರಿ, ಅವಿಚಾರಿ. ಇವನು ಮಾಂಟ್‍ಪೆಲಿಯರ್‍ನ ಸ್ವಾಮಿನಿ ಮೇರಿಯನ್ನು ಮದುವೆಯಾಗಿ ಅವಳ ಕಡೆಯಿಂದ ವ್ಯಾಪಕವಾದ ಪ್ರದೇಶ ಗಳಿಸಿದ. ಇವನು ತನ್ನ ಪ್ರಜೆಗಳ ಇಷ್ಟಕ್ಕೆ ವಿರುದ್ಧವಾಗಿ ಪೋಪ್ 3 ನೆಯ ಇನೊಸೆಂಟಿನಿಂದ ಪಟ್ಟಾಭಿಷಿಕ್ತನಾಗಿ ಅವನು ಆಶ್ರಿತನೆಂದು ಘೋಷಿಸಿಕೊಂಡ. ಈತ ಮೂರೆಟ್ ಕದನದಲ್ಲಿ 1213 ರಲ್ಲಿ ತೀರಿಕೊಂಡ.

ಪೀಟರ್ III : 1236-1285. 1 ನೆಯ ಜೇಮ್ಸನ ಮಗ. ಅವನ ಮರಣದ ಅನಂತರ ದೊರೆಯಾದ. ಸಿಸಿಲಿಯ ಹೋಹೆನ್‍ಸ್ಟಾಫೆನ್ ದೊರೆ ಮ್ಯಾನ್‍ಫ್ರೆಡನ ಉತ್ತರಾಧಿಕಾರಿಣಿಯಾದ ಕಾನ್ಸ್ಟೆನ್ಸಳನ್ನು ಮದುವೆಯಾದ. ಸಿಸಿಲಿಯನ್ನು ಆಕ್ರಮಿಸಿಕೊಂಡು ಅದರ ದೊರೆಯೆಂದು ಘೋಷಿಸಿಕೊಂಡನಲ್ಲದೆ, ಮಹಾಶಯನೆಂಬ ಬಿರುದು ಪಡೆದ. 1285 ರಲ್ಲಿ ಫ್ರಾನ್ಸಿನ 3 ನೆಯ ಫಿಲಿಪ್ ಆರಗಾನಿವ ಮೇಲೆ ದಂಡೆತ್ತಿ ಬಂದು ಭಾರಿ ಸೋಲನ್ನನುಭವಿಸಿದ. ಅದೇ ವರ್ಷ ಪೀಟರ್ ತೀರಿಕೊಂಡ.

ಪೀಟರ್ IV : 1319-1387. ನಾಲ್ಕನೆಯ ಆಲ್ಫಾನ್ಸೋನ ಮಗ. 1336 ರಲ್ಲಿ ತಂದೆಯ ಸಿಂಹಾಸನವನ್ನೇರಿದ. 14 ನೆಯ ಶತಮಾನದ ಸ್ಪಾನಿಷ್ ದೊರೆಗಳ ಪೈಕಿ ಅತ್ಯಂತ ನಯಗಾರ. ರಾಜಕಾರಣದಲ್ಲಿ ಇವನು ನಡೆಸಿದ ಕೈವಾಡ ಅಸಾಧಾರಣವಾದ್ದು. ಆರಗಾನಿನ ಶ್ರೀಮಂತರನ್ನು ಎಪಿಲ ಎಂಬಲ್ಲಿ (1348À) ಸೋಲಿಸಿದ. ಮೆಜೊರ್ಕನ್ ದೊರೆಯೊಂದಿಗೆ ಯುದ್ಧ ಮಾಡಿ ಅವನ ಬ್ಯಾಲೆರಿಕ್ ದ್ವೀಪಗಳನ್ನೂ ರೊಸಿಲಾನನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಕ್ಯಾಸ್ಟಿಲಿನ 1 ನೆಯ ಪೀಡ್ರೊ ವಿರುದ್ಧ ಯುದ್ಧಗಳಲ್ಲಿ ಸೋಲನ್ನನುಭವಿಸಬೇಕಾಯಿತು. ಕೊನೆಗಾಲದಲ್ಲಿ ಇವನು ತನ್ನ ಉತ್ತರಾಧಿಕಾರಿಯೊಂದಿಗೆ ಯುದ್ಧ ಮಾಡಬೇಕಾಯಿತು. ಇವನು 1387 ರಲ್ಲಿ ತೀರಿಕೊಂಡ. 

3. ಕ್ಯಾಸ್ಟಿಲ್‍ನ ದೊರೆ : ಪೀಟರ್ : 1334-1369. ಪೀದ್ರೊ ಕ್ಯಾಸ್ಟಿಲ್‍ನ ದೊರೆ. (1359-1369). 11 ನೆಯ ಆಲ್ಫಾನ್ಸೋನ ಮಗ. ಈತ ಕ್ರೂರಿಯೆಂದು ಪ್ರತೀತಿ. ವಾಸ್ತವವಾಗಿ ಇವನು ಶೂರ, ಧೈರ್ಯಶಾಲಿ, ಉತ್ಸಾಹಿ, ಸಮರ್ಥ ಸೇನಾನಾಯಕ. ಆದರೆ ರಾಗೋದ್ರೇಕದಿಂದ ಕೂಡಿ ರಾಜದ್ರೋಹಿಗಳೆಂಬ ಸಂಶಯಕ್ಕೆ ಒಳಗಾದವರನ್ನು ವಿಚಾರಣೆಯಿಲ್ಲದೆ ಕೊಲ್ಲುತ್ತಿದ್ದ. 1353 ರಲ್ಲಿ ಬಲವಂತಕ್ಕೆ ಕಟ್ಟುಬಿದ್ದು ಬೂರ್ಬನ್ನಿನ ಬ್ಲಾಂಜೆ ಎಂಬವಳನ್ನು ಮದುವೆಯಾದನಾದರೂ ಮರಿಯಾಡ ಪದಿಲ್ಲಾ ಎಂಬವಳ ಮೋಹಕ್ಕೆ ಒಳಗಾಗಿದ್ದ. 1361 ರಲ್ಲಿ ಆಕೆ ತೀರಿಕೊಳ್ಳುವವರೆಗೂ ಅವರಿಬ್ಬರ ಸಂಬಂಧ ಮುಂದುವರೆಯಿತು. ತನ್ನ ಜಾರಜ ಮಲಸೋದರರೊಂದಿಗೆ ಇವನು ಬಡಿದಾಡಬೇಕಾಯಿತು. ಅವರ ನಾಯಕ ಹೆನ್ರಿ ಕೊನೆಗೆ ಆರಗಾನಿನ ದೊರೆ 4 ನೆಯ ಪೀಟರ್‍ನ ಆಶ್ರಯ ಪಡೆದ. ಆತನೊಂದಿಗೆ ಇವನು ಭೀಕರ ಯುದ್ಧ ಮಾಡಿ ಜಯ ಗಳಿಸಿದ. 4 ನೆಯ ಪೀಟರ್, ಫ್ರಾನ್ಸಿನ 5 ನೆಯ ಚಾಲ್ರ್ಸ್, ಪೋಪ್ 9 ನೆಯ ಆರ್ಬನ್ ಇವರು ಸೇರಿ ಇವನ ಮೇಲೆ ವೃತ್ತಿ ಯೋಧರನ್ನು ಕಳುಹಿಸಿಕೊಟ್ಟರು. ಕ್ಯಾಸ್ಟಲ್‍ನ ದೊರೆ ಸೋತು ಓಡಿಹೋಗಿ ಇಂಗ್ಲೆಂಡಿನ ನೆರವು ಬೇಡಿದ. ಎಡ್ವರ್ಡ್ ಬ್ಲ್ಯಾಕ್‍ಪ್ರಿನ್ಸಿನ ಸಹಾಯದಿಂದ ಪೀಟರನಿಗೆ ಅವನ ರಾಜ್ಯ ಹಿಂದಕ್ಕೆ ದೊರಕಿತು. (1367). ಪೀಟರನಿಗೂ ಎಡ್ವರ್ಡನಿಗೂ ಮನಸ್ತಾಪ ಬಂತು. ಫ್ರಾನ್ಸಿನ 5 ನೆಯ ಚಾಲ್ರ್ಸ್ ಹೆಚ್ಚಿನ ಸೇನೆಯೊಂದಿಗೆ ಹೆನ್ರಿಯನ್ನು ಮತ್ತೆ ಕ್ಯಾಸ್ಟೆಲ್‍ನ ಮೇಲೆ ಕಳಿಸಿದ. ದೀರ್ಘ ಅಂತರ್ಯುದ್ಧ ನಡೆಯಿತು. ಕೊನೆಗೆ ಪೀಟರ್ ಸೋತು ಹೆನ್ರಿಯಿಂದ ಕೊಲೆಗೆ ಈಡಾದ. 

4. ರಷ್ಯದ ದೊರೆಗಳು (ಜಾರ್) ಪೀಟರ್ I : ಪೀಟರ್ ಅಲೆಕ್ಸೀವಿಜ್. 1672-1721 ಮಹಾಶಯನೆಂದು ಪ್ರಸಿದ್ಧನಾದವ. ಅಲೆಕ್ಸೀನನಿಗೆ ಅವನ ಎರಡನೆಯ ಹೆಂಡತಿಯಲ್ಲಿ ಹುಟ್ಟಿದ. ತನ್ನ ಬಲ ಸೋದರ ಐವಾನನೊಂದಿಗೆ ಕೂಡಿ 1682 ರಿಂದ 1689 ರ ವರೆಗೂ ಅನಂತರ ಸ್ವತಂತ್ರವಾಗಿಯೂ ರಾಜ್ಯವಾಳಿದ. ಯುಡೋಕ್ಸಿಯಳೊಂದಿಗೆ 1689 ರಲ್ಲಿ ಇವನ ಮದುವೆಯಾಗಿತ್ತು. ಆಕೆಯನ್ನು ಸನ್ಯಾಸಿ ಮಠವೊಂದಕ್ಕೆ ಕಳುಹಿಸಿ ಸ್ವಲ್ಪ ಕಾಲಾನಂತರ (1712) ಇವನು ಕ್ಯಾದರಿನಳನ್ನು ಮದುವೆಯಾದ. 1696-97 ರಲ್ಲಿ ಈತ ಯೂರೋಪಿನಲ್ಲಿ ಸಂಚರಿಸಿದ. 1698 ರಲ್ಲಿ ಸ್ಟ್ರೆಲಿಟ್ಸಿ ದಂಗೆಯನ್ನು ದಮನ ಮಾಡಿದ ಮೇಲೆ 1700 ರಿಂದ 1721 ರ ವರೆಗೆ ದೀರ್ಘ ಯುದ್ಧದಲ್ಲಿ ಭಾಗವಹಿಸಿದ. ಸ್ವೀಡನ್ನಿನ 12 ನೆಯ ಚಾಲ್ರ್ಸ್‍ನಿಂದ ಇವನು 1700 ರಲ್ಲಿ ನಾರ್ವಾದಲ್ಲಿ ಸೋಲನ್ನನುಭವಿಸಬೇಕಾಯಿತು. ಆದರೆ, 1709 ರಲ್ಲಿ ಚಾಲ್ರ್ಸ್‍ನೇ ಪೋಲ್ಟಾದಲ್ಲಿ ಸೋತ. ರಷ್ಯ-ಸ್ವೀಡನ್‍ಗಳ ನಡುವೆ 1721 ರಲ್ಲಿ ಶಾಂತಿ ಕೌಲು ಏರ್ಪಟ್ಟಿತು. ರಷ್ಯಕ್ಕೆ ಲಿವೊನಿಯ ಎಸ್ಟೊನಿಯ, ಇಂಗರ್ಮನ್ ಲ್ಯಾಂಡ್ ಪ್ರದೇಶಗಳೂ ಕರೇಲಿಯಾದ ಒಂದು ಭಾಗವೂ ಸೇರಿದವು. 1703 ರಲ್ಲಿ ಇವನು ಸೆಂಟ್ ಪೀಟರ್ಸ್ ಬರ್ಗ್ ಎಂಬ ಹೆಸರಿನ ಹೊಸ ರಾಜಧಾನಿಯನ್ನು ಸ್ಥಾಪಿಸಿದ. ರಷ್ಯಕ್ಕೆ ಪಾಶ್ಚಾತ್ಯ ನಾಗರಿಕತೆಯನ್ನು ತಂದವನೆಂದೂ ಯೂರೋಪಿನ ದೊಡ್ಡ ದೇಶಗಳ ಸಾಲಿನಲ್ಲಿ ರಷ್ಯಕ್ಕೂ ಸ್ಥಾನ ದೊರಕಿಸಿಕೊಟ್ಟವನೆಂದೂ ಇವನು ಪ್ರಸಿದ್ಧಿ ಗಳಿಸಿದ.

ಪೀಟರ್ II : ಪೀಟರ್ ಅಲೆಕ್ಸೀವಿಜ್. 1715-1730. ಒಂದನೆಯ ಪೀಟರ್‍ನ ಮೊಮ್ಮಗ. ಅಲೆಕ್ಸಿಸನ (ಅಲೆಕ್ಸಿ ಪೆಟ್ರೊವಿಜ್) ಮಗ. ಇವನು ಹುಟ್ಟಿದ ಮೇಲೆ ತಾಯಿ ತೀರಿಕೊಂಡಳು. ತಂದೆಯನ್ನು 1718 ರಲ್ಲಿ ಕೊಲ್ಲಲಾಯಿತು. ಒಂದನೆಯ ಕ್ಯಾದರಿನಳ ಅನಂತರ ಇವನು ಅಧಿಕಾರಕ್ಕೆ ಬಂದ. (1727). 1728 ರಲ್ಲಿ ಇವನ ಪಟ್ಟಾಭಿಷೇಕವಾಯಿತು. ಸಡಿಲ ಬಾಳನ್ನು ನಡೆಸಲು ಇವನಿಗೆ ಉತ್ತೇಜನ ನೀಡಲಾಗಿತ್ತು. ಅಲೆಕ್ಸಿ ಡೋಲ್ಗೊರುಕಿಯ ಮಗಳು ಕ್ಯಾದರಿನಳೊಡನೆ ಇವನ ವಿವಾಹ ನಿಶ್ಚಯವಾಗಿತ್ತು. ಆದರೆ, ಮದುವೆ ಗೊತ್ತಾದ ದಿನದಂದೇ ಸಿಡುಬಿಗೆ ಬಲಿಯಾದ (1730).

ಪೀಟರ್ III : ಪೀಟರ್ ಫಿಯೊಡೊರೊವಿಜ್. 1728-1762. ಒಂದನೆಯ ಪೀಟರ್‍ನ ಮಗಳು ಅನಾಳ ಮಗ. ಚಿಕ್ಕಮ್ಮ ಎಲಜûಬೆತಳ ಅನಂತರ ಚಕ್ರವರ್ತಿಯಾದ (1762). ಎಲೆಜûಬೆತ್ ಇವನಿಗೆ ಸೋಫಿಯಾ ಅಗಸ್ಟ ಫ್ರೆಡರಿಕ್ ಎಂಬುವಳೊಂದಿಗೆ ಮದುವೆ ಮಾಡಿದಳು. ವಿವಾಹಾದ ಮೇಲೆ ಸೋಫಿಯಾಳ ಅಭಿಧಾನ ಕ್ಯಾದರಿನ್ ಅಲೆಕ್ಸೀವ್ನ ಎಂದಾಯಿತು. ಪೀಟರ್ ಮಾನಸಿಕವಾಗಿ ದುರ್ಬಲನಾಗಿದ್ದ. ಇವನ ಪತ್ನಿಯ ಬೆಂಬಲದೊಂದಿಗೆ ಕೆಲವು ಶ್ರೀಮಂತರು ಸಂಚು ಹೂಡಿ ಇವನನ್ನು ಪದಚ್ಯುತಗೊಳಿಸಿದರು. (1762). ಅದೇ ವರ್ಷ ಪೀಟರ್ ಕೊಲೆಗೆ ಈಡಾದ. ಅನಂತರ ಇವನ ಹೆಂಡತಿ 2 ನೆಯ ಕ್ಯಾದರಿನ್ ಸಿಂಹಾಸನವೇರಿದಳು.
(ಎಚ್.ಜಿ.ಬಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ